ಕುಕ್ಕೆ ಸುಬ್ರಹ್ಮಣ್ಯ : ಆದಾಯ ಗಳಿಕೆಯಲ್ಲಿ ರಾಜ್ಯದಲ್ಲಿ ಮೊದಲ ಸ್ಥಾನದಲ್ಲಿರುವ ಕುಕ್ಕೆ ಸುಬ್ರಹ್ಮಣ್ಯಕ್ಕೆ ಸಂಪರ್ಕಿಸುವ ಪ್ರಮುಖ ರಾಜ್ಯ ರಸ್ತೆ ( ಕುಮಾರಧಾರ- ಕೈಕಂಬ) ಯಲ್ಲಿ ಅಪಾಯಕಾರಿ ಗುಂಡಿಗಳು ನಿರ್ಮಾಣವಾಗಿವೆ. ಇದೀಗ ಭಿನ ರೀತಿಯ ಬ್ಯಾನರ್ ಪ್ರತ್ಯಕ್ಷಗೊಳ್ಳುವ ಮೂಲಕ ಮತ್ತೆ ಈ ಹೆದ್ದಾರಿ ಗುಂಡಿಗಳು ಸುದ್ದಿಯಲ್ಲಿದೆ.
“ ಯಾರೋ ಮಾಂತ್ರಿಕರು ಕೈಕಂಬದಿಂದ - ಕುಕ್ಕೆ ಸುಬ್ರಹ್ಮಣ್ಯ ವರೆಗಿನ ರಸ್ತೆಯಲ್ಲಿ ನಿಧಿ ಇದೆ ಎಂದು ಹೇಳಿದ ಕಾರಣ ಎಚ್ಚೆತ್ತ ರಾಜ್ಯ ಸರ್ಕಾರ ಈ ರಸ್ತೆಯಲ್ಲಿ ನಿಧಿಯನ್ನು ಹುಡುಕಿಸುವ ಕಾರಣದಿಂದ ಅಲ್ಲಲ್ಲಿ ರಸ್ತೆ ಮದ್ಯೆಯೇ ದೊಡ್ಡ ಹೊಂಡಗಳನ್ನು ತೋಡಿಸಿ ಹಾಗೇಯೇ ಬಿಟ್ಟಿದ್ದಾರೆ , ನಿಧಾನವಾಗಿ ಚಲಿಸಿ” ಎಂಬ ಒಕ್ಕಣೆ ಬರೆದು ರಸ್ತೆ ಬಗೆಗಿನ ಅಧಿಕಾರಿಗಳ ನಿರ್ಲಕ್ಷ ಮತ್ತು ಸವಾರರಿಗೆ ಎಚ್ಚರಿಕೆಯ ಸಂದೇಶವನ್ನು ಬ್ಯಾನರ್ ನಲ್ಲಿ ಬಿಂಬಿಸಲಾಗಿದೆ.
ಕೈಕಂಬ ಸಮೀಪ ರಸ್ತೆ ಬದಿಯಲ್ಲಿ ಈ ಬ್ಯಾನರ್ ಕಂಡು ಬಂದಿದ್ದು ಸ್ಥಳೀಯರೇ ಆಕ್ರೋಶ ವ್ಯಕ್ತಪಡಿಸಿ ಹಾಕಿರಬಹುದೆಂದು ಹೇಳಲಾಗುತ್ತಿದೆ. ಇತ್ತೀಚೆಗೆ ಸ್ಥಳೀಯ ವಾಹನ ಸವಾರರು ರಸ್ತೆಯಲ್ಲೇ ಟೇಪ್ ಹಿಡಿದು ಅಳತೆ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ. ಕುಮಾರಧಾರ ಸೇತುವೆ ಬಳಿ ಸುಮಾರು 12 ಫೀಟ್ ಅಗಲಕ್ಕೆ, ಮೂರು ಫೀಟ್ ಆಳದ ಹೊಂಡ ಪತ್ತೆಯಾಗಿದೆ ಎಂದು ಗುಂಡಿಗಳ ಬಗ್ಗೆ ಅಧಿಕಾರಿಗಳ ಗಮನ ಸೆಳೆದಿದ್ದರು. ಇದರಿಂದ ಎಚ್ಚೆತ್ತ ಅಧಿಕಾರಿಗಳು ಗುಂಡಿಗೆ ಕ್ರಷರ್ ಹಾಕಿ ಮುಚ್ಚಿದ್ದರು. ಇದೀಗ ಮತ್ತೆ ಗುಂಡಿಗಳು ಸವಾರರಿಗೆ ತೊಂದರೆ ಕೊಡುತ್ತಿವೆ.
ರಸ್ತೆಯ ರಾಜ್ಯದ ವಿವಿಧ ಮೂಲೆಗಳಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬರುವ ಭಕ್ತರು, ಸಾರ್ವಜನಿಕರು ಈ ಪ್ರಮುಖ ರಸ್ತೆಯಲ್ಲೇ ಅವಲಂಬಿಸಬೇಕಾಗಿದೆ. ಎಂತಹ ಪರಿಣತಿ ಪಡೆದ ಚಾಲಕನಿಂದಲೂ ಈ ಹೊಂಡ ತಪ್ಪಿಸಲು ಸಾಧ್ಯವೇ ಇಲ್ಲದಂತಹ ಪರಿಸ್ಥಿತಿ ಎದುರಾಗಿದೆ. ವಿವಿಧ ಇಲಾಖೆಗಳ ಅಧಿಕಾರಿಗಳೂ ಇದೇ ರಸ್ತೆಯಲ್ಲಿ ಸಂಚರಿಸುತ್ತಿದ್ದರೂ ರಸ್ತೆ ಗುಂಡಿಯಿಂದ ಸವಾರರಿಗೆ ತೊಂದರೆಯಾಗುವುದರ ಬಗ್ಗೆ ಗಮನವೇ ಹರಿಸಿಲ್ಲ ಎಂಬುದು ವಾಹನ ಸವಾರರ ಆರೋಪವಾಗಿದೆ.
ದುರ್ಘಟನೆಗಳು ಸಂಭವಿಸುವ ಮೊದಲೇ ಅಧಿಕಾರಿಗಳು ಸಂಬಂಧಪಟ್ಟ ಇಲಾಖೆಯವರು ಆದಷ್ಟು ಬೇಗ ಈ ಹೊಂಡಗಳನ್ನು ಮುಚ್ಚಿ ಕ್ಷೇತ್ರಕ್ಕೆ ಆಗಮಿಸುವ ಭಕ್ತರಿಗೆ, ವಾಹನ ಸವಾರರಿಗೆ ಅನುಕೂಲ ಮಾಡಿಕೊಡಬೇಕೆಂಬ ಆಗ್ರಹ ಕೇಳಿ ಬರುತ್ತಿದೆ.
Post a Comment