ಕುಕ್ಕೆ ಸುಬ್ರಹ್ಮಣ್ಯ; ನ,27,ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ
ಪೂರ್ವಶಿಷ್ಟ ಸಂಪ್ರದಾಯ ಪ್ರಕಾರ ಕ್ರೋಧಿಕೃತ್ ನಾಮ ಸಂವತ್ಸರದ ಕಾರ್ತಿಕ ಬಹುಳ ದ್ವಾದಶಿ ಬುಧವಾರ 27-11-2024 ,7.42 ರ ವೃಶ್ಚಿಕ ಲಗ್ನ ಶುಭಮೂರ್ತದಲ್ಲಿ
ಕೊಪ್ಪರಿಗೆ ಇಡಲಾಗಿದೆ.
ರಾಮ- ಲಕ್ಷ್ಮಣರ ಕೊಪ್ಪರಿಗೆ;
ಚಂಪಾಷಷ್ಠಿ ವೇಳೆ ಇಲ್ಲಿರುವ “ರಾಮ-ಲಕ್ಷ್ಮಣ’ ಎಂಬ ಹೆಸರಿನ ಜೋಡಿ ಅನ್ನದ ಕೊಪ್ಪರಿಗೆ ಮಹತ್ವ ಪಡೆದುಕೊಳ್ಳುತ್ತದೆ. ಈ ಜೋಡಿ ಅನ್ನಕೊಪ್ಪರಿಗೆಗೆ ವಿಶೇಷ ಪೂಜೆ ಸಂದ ಬಳಿಕ, ದೇಗುಲದ ಒಳಾಂಗಣದ ಎರಡು ಒಲೆಗಳ ಮೇಲೆ ಅದನ್ನು ಏರಿಸಲಾಗುತ್ತದೆ. ಕೊಪ್ಪರಿಗೆಯಲ್ಲಿ ಸಿದ್ಧವಾದ ಅನ್ನ ಪ್ರಸಾದವನ್ನು ಭಕ್ತರಿಗೆ ವಿತರಿಸಲಾಗುತ್ತದೆ.
ಎಲ್ಲಾ ಕ್ಷೇತ್ರಗಳಲ್ಲಿ ಕೊಡಿ ಏರುವುದರ ಮೂಲಕ ಜಾತ್ರೆಗೆ ಚಾಲನೆ ಲಭಿಸಿದರೆ, ಕುಕ್ಕೆ ಕ್ಷೇತ್ರದಲ್ಲಿ ಮಾತ್ರ ಕೊಪ್ಪರಿಗೆ ಏರಿಸುವುದರೊಂದಿಗೆ ಜಾತ್ರೋತ್ಸವ ಪ್ರಾರಂಭಗೊಳ್ಳುವುದು ವಿಶೇಷ. ಸಂಪ್ರದಾಯದಂತೆ ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಸೀತಾರಾಮ ಎಡಪಡಿತ್ತಾಯ ವಿದಿ ವಿಧಾನಗಳನ್ನು ನೆರವೇರಿಸಿದರು.
ಪ್ರಧಾನ ಅರ್ಚಕರು ‘ರಾಮಲಕ್ಷ್ಮಣ’ ಹೆಸರಿನ ಜೋಡಿ ಅನ್ನದ ಕೊಪ್ಪರಿಗೆಗಳಿಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ದೇವಳದ ಒಳಾಂಗಣದಲ್ಲಿರುವ ದೊಡ್ಡದಾದ ಎರಡು ಒಲೆಗಳ ಮೇಲೆ ಅನ್ನದಾನದ ಸಂಕೇತವಾದ ಕೊಪ್ಪರಿಗೆಗಳನ್ನು ಏರಿಸಲಾಯಿತು.
ರಾತ್ರಿ ಶೇಷವಾಹನಯುಕ್ತ ಬಂಡಿ ಉತ್ಸವ ನಡೆಯಲಿದೆ.
ಈ ಸಂದರ್ಭದಲ್ಲಿ ದೇವಳದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ಎ ಇ ಒ ಯೇಸುರಾಜ್, ದೇವಳದ ಸಿಬ್ಬಂದಿ ವರ್ಗ, ಹಾಗೂ ಊರಿನ ಭಗವದ್ಭಕ್ತರು ಉಪಸ್ಥಿತರಿದ್ದರು.
Post a Comment