ಇಚ್ಲಂಪಾಡಿ ಗ್ರಾಮದ ಮಾನಡ್ಕ ನಿವಾಸಿ ಸತೀಶ್ (45ವ.)ಎಂಬವರ ಮನೆಯಲ್ಲಿ ನ.15ರ ರಾತ್ರಿ 8 ಗಂಟೆಯಿಂದ ನ.17ರ ಮುಂಜಾನೆ 4.30ರ ಮಧ್ಯೆ ಈ ಕೃತ್ಯ ನಡೆದಿದೆ. ಮನೆಯ ಹಿಂಬಾಗಿಲ ಮೂಲಕ ಒಳಪ್ರವೇಶಿಸಿದ ಕಳ್ಳರು ಆಭರಣ ಕಳವು ಮಾಡಿ, ದಾಖಲಾತಿ ಇದ್ದ ಕಪಾಟನ್ನು ಬೆಂಕಿಯಿಂದ ಸುಟ್ಟುಹಾಕಿದ್ದಾರೆ. ಸತೀಶ್ ಅವರು ತನ್ನ ಅಕ್ಕ ವನಜ ಅವರ ಮಗಳ ಮದುವೆ ಡಿನ್ನರ್ ಕಾರ್ಯಕ್ರಮಕ್ಕೆ ನ.15ರಂದು ರಾತ್ರಿ 8 ಗಂಟೆಗೆ ಮನೆಗೆ ಬೀಗ ಹಾಕಿ ಹೋಗಿದ್ದಾರೆ. ನ.17ರಂದು ಬೆಳಿಗ್ಗೆ 3.40ರ ವೇಳೆಗೆ ಅಣ್ಣನ ಮಗಳು ದಿಶಾ ಫೋನ್ ಮಾಡಿ ಮನೆಯೊಳಗೆ ಬೆಂಕಿ ಉರಿಯುತ್ತಿರುವುದಾಗಿ ಮಾಹಿತಿ ನೀಡಿದ್ದು, ಅದರಂತೆ ಸತೀಶ್ ಅವರು ಸಂಬಂಧಿಕರ ಕಾರಿನಲ್ಲಿ ಬೆಳಿಗ್ಗೆ ೪.೩೦ಕ್ಕೆ ಮನೆಗೆ ಬಂದಾಗ ಕೃತ್ಯ ಬೆಳಕಿಗೆ ಬಂದಿದೆ.
ಬೆಡ್ ರೂಮ್‌ನಲ್ಲಿ ಇರಿಸಿದ್ದ ಕಬ್ಬಿಣದ ಕಪಾಟು ಸಂಪೂರ್ಣ ಉರಿದು ಹೋಗಿದ್ದು, ಕಪಾಟಿನಲ್ಲಿದ್ದ ಚಿನ್ನಾಭರಣ ಕಳವಾಗಿದೆ. ಅಲ್ಲದೇ ಹಾಲ್‌ನ ದಕ್ಷಿಣದ ಬದಿಯ ಬೆಡ್‌ರೂಮ್‌ನಲ್ಲಿದ್ದ ಇನ್ನೊಂದು ಕಪಾಟನ್ನು ತೆರೆದು ಚೆಲ್ಲಾಪಿಲ್ಲಿ ಮಾಡಿದ್ದಾರೆ. ಬೆಂಕಿಯಿಂದ ಸುಟ್ಟು ಹೋದ ಕಪಾಟಿನಲ್ಲಿ ಜಾಗದ ದಾಖಲಾತಿಗಳು, ಬ್ಯಾಂಕ್ ದಾಖಲಾತಿಗಳು, ಆಧಾರ್ ಕಾರ್ಡ್‌ಗಳು, ಅಣ್ಣ ಬಾಲಕೃಷ್ಣರವರ ಅಂಗವಿಕಲ ಕಾರ್ಡ್, ಕೋಳಿಫಾರಂಗೆ ಸಂಬಂಧಿಸಿದ ದಾಖಲಾತಿಗಳು ಸಂಪೂರ್ಣ ಬೆಂಕಿಯಿಂದ ಸುಟ್ಟು ಹೋಗಿವೆ ಎಂದು ವರದಿಯಾಗಿದೆ.
ಇಚ್ಲಂಪಾಡಿ ಮಾನಡ್ಕ ನಿವಾಸಿ ಮೋಹಿನಿಯವರ ಮನೆಯಲ್ಲೂ ನ.17ರಂದು ಕಳೆದ ರಾತ್ರಿ ಕಳ್ಳತನಕ್ಕೆ ಯತ್ನ ನಡೆದಿದೆ.
ಮೋಹಿನಿ ಅವರು ಪತಿ ಹಾಗೂ ಮಗಳು ದಿಶಾಳೊಂದಿಗೆ ನ.16ರಂದು ರಾತ್ರಿ 10.30 ಗಂಟೆಗೆ ಮನೆಯಲ್ಲಿ ಊಟ ಮಾಡಿ ಮಲಗಿದ್ದು, ರಾತ್ರಿ 1.30ರ ವೇಳೆಗೆ ಕರೆಂಟ್ ಹೋಗಿದ್ದು, ಮನೆ ಒಳಗೆ ಕತ್ತಲಲ್ಲಿ ಯಾರೋ ಕಳ್ಳರು ಅಡ್ಡಾಡುತ್ತಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಮಗಳು ಮತ್ತು ಪತಿಯನ್ನು ಎಬ್ಬಿಸಿದ್ದಾರೆ. ಮೂವರು ಎದ್ದಾಗ ಹಿಂಬದಿ ಬಾಗಿಲಿನ ಮುಖೇನ ವ್ಯಕ್ತಿಯೋರ್ವರು ಹೊರಗೆ ಹೋಗುತ್ತಿರುವುದನ್ನು ಮಗಳು ದಿಶಾ ನೋಡಿದ್ದಾರೆ. ಮೋಹಿನಿ ಅವರ ಮನೆಯ ಹಿಂಬದಿಯ ಬಾಗಿಲನ್ನು ತೆರೆದು ಅಥವಾ ಮನೆಯ ಹಿಂಬದಿಯ ಕಿಟಕಿಯ ಮೇಲೆ ಸ್ವಲ್ಪ ತೆರೆದ ಜಾಗವಿದ್ದು, ಇದರ ಮುಖೇನ ಯಾರೋ ಕಳ್ಳರು ಮನೆಯ ಒಳಗಡೆ ನುಗ್ಗಿ ಕಳವು ಮಾಡಲು ಪ್ರಯತ್ನಿಸಿರುವುದಾಗಿ ವರದಿಯಾಗಿದೆ.
ಈ ಎರಡೂ ಮನೆಯಲ್ಲಿ ಕಳ್ಳತನ ನಡೆದಿರುವ ಬಗ್ಗೆ ಮನೆಯವರು ನೀಡಿದ ದೂರಿನಂತೆ ಉಪ್ಪಿನಂಗಡಿ ಠಾಣೆಯಲ್ಲಿ ಕೇಸು ದಾಖಲಾಗಿದೆ.
إرسال تعليق